ಭೇಟಿ ಕೊಡಿ - ನುಡಿನಮನ

ಸಮಸ್ತ ಕನ್ನಡ ಕುಲಕೋಟಿಗೆ `ಆಲೆಮನೆ' ಇರುವೆಗಳಿಂದ `ನುಡಿನಮನ'ದ ಗೂಡಿಗೆ ಸವಿ ಸಾಲಿನ ಆಹ್ವಾನ. ನಾಳೆಯಿಂದ ನಮ್ಮ ತಂಡವು ಈ ತಾಣದ ಮುಖೇನ ರಂಗ ಪ್ರವೇಶಿಸುತ್ತಿದೆ. ಮಕ್ಕಳಿಂದ ಮುದುಕರವರೆಗಿನ ಎಲ್ಲಾ ಕನ್ನಡದ ಮನಸ್ಸುಗಳಿಗಾಗಿಯೇ ಈ ವೇದಿಕೆ.

ಪ್ರಸ್ತುತ 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆಯಲ್ಲಿ ನಾವು ನಮ್ಮ ಈ ತಾಣಕ್ಕೆ ಶ್ರೀಕಾರ ಹಚ್ಚಿದ್ದೇವೆ. ಕನ್ನಡ ಸಾಹಿತ್ಯ ಸಮ್ಮೇಳನವೆನ್ನುವುದು ಸಾಹಿತ್ಯ ಜಾತ್ರೆಯೋ? ಜನ ಜಾತ್ರೆಯೋ? ಎಂಬ ಪ್ರಶ್ನೆಗಳಿವೆಯಾದರೂ ಕನ್ನಡ ಜಾತ್ರೆ ಅನ್ನೋದರಲ್ಲಿ ಯಾವುದೇ ಅನುಮಾನಗಳಿಲ್ಲ. ಕೆಲವರಿಗಿದು ಸೆಮಿನಾರು-ಘೋಷ್ಠಿಗಳ ಗಂಭೀರ ಚಿಂತನವಾದರೆ, ಮತ್ತೆ ಕೆಲವರಿಗಿದು ಮಿತ್ರಮಂಡಳಿ, ಇನ್ನೂ ಕೆಲವರಿಗಿದು ಪುಸ್ತಕ ಸಂತೆ, ಇನ್ನುಳಿದವರಿಗೆ ಪ್ರವಾಸದ ಮೋಜು! ಇನ್ನೂ ಕೆಲವರಿರುತ್ತಾರೆ ಅವರಿಗಿದು ಭರ್ಜರಿ ವ್ಯಾಪಾರ, ಮತ್ತೊಂದು ವಿಶೇಷ ವರ್ಗವಿದೆ ಅವರಿಗಿದು ಉರವಣಿಗೆಯ ವೇದಿಕೆ. ಹೀಗೆ ಅವರವರ ಭಾವಕ್ಕೆ ಅವರ ಭಕುತಿಗೆ ಎಂಬಂತೆ ನಡೆದುಕೊಂಡು ಬಂದಿರುವ ಸಾಹಿತ್ಯ ಸಮ್ಮೇಳನದ ಕುರಿತಾಗಿ ಇಂದು `ಮರುವಿಮರ್ಶೆ'ಗಿಂತಲೂ ಖಡಕ್ ಚರ್ಚೆ ಅಗತ್ಯ. ಅದಕ್ಕೆ ವೇದಿಕೆಯಾಗಿ ರೂಪುಗೊಳ್ಳುವ ಆಶಯ ನಮ್ಮದು.

ನಿಗದಿತ ದಿನಾಂಕಗಳಂದು ನಡೆಯುತ್ತೋ ಇಲ್ಲವೋ ಎಂಬ ಸಸ್ಪೆನ್ಸ್ ಅನ್ನು ತಕ್ಕಮಟ್ಟಿಗೆ ಇನ್ನೂ ಉಳಿಸಿಕೊಂಡಿರುವ ಈ ಬಾರಿಯ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ವಿವಾದಗಳಿಗೆ, ಗೊಣಗಾಟಗಳಿಗೆ ಎಡೆ ಮಾಡಿಕೊಡದಂತೆ ಕರುನಾಡ ಹಿರಿಯಕ್ಕನಂತಹ ಗೀತಾ ನಾಗಭೂಷಣ್ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆರಿಸಿರುವುದು ಅಭಿನಂದನಾರ್ಹ. ಉತ್ತರ ಕರ್ನಾಟಕದ ಬದುಕಿನ ಮೇಲೆ ಬರೆ ಎಳೆದ ಅತಿವೃಷ್ಟಿಯ ಕಾರಣದಿಂದ ಉರವಣಿಗೆ-ಮೆರವಣಿಗೆಗಳಿಲ್ಲದ ಸರಳ ಅರ್ಥಪೂರ್ಣ ಸಮ್ಮೇಳನ ಇದಾಗಲಿದ್ದು, ನೆರೆ ಸಂತ್ರಸ್ತರಿಗೆ ಸಾಹಿತ್ಯ, ಸಂಸ್ಕೃತಿಯ ಮೂಲಕ ಸಾಂತ್ವನ ಹೇಳುವ ಸಮ್ಮೇಳನವಾಗಲಿದೆ. ಕಸಾಪದ ಸೌಜನ್ಯಕ್ಕೆ ನಾಡಿನ ಜನರು ಋಣಿ!

ಹ್ಞಾಂ! ಹಾಗೇ......, ಈ ಇರುವೆ ಗುಂಪು 18ಕ್ಕೆ ಗದುಗಿನ ಗಡಿ ಮುಟ್ಟಿ, ಸತತ ನಾಲ್ಕುದಿನಗಳ ಕಾಲ ಅಲ್ಲಿಂದ ನೇರವಾಗಿ `ನುಡಿನಮನ'ದ ಮುಖೇನ ನಿಮ್ಮ ಮುಂದೆ ತರಲಿದ್ದೇವೆ - 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕ್ಷಣಕ್ಷಣದ ಚಿತ್ರಣ.ಮೇ ಫ್ಲವರ್ ಮೀಡಿಯಾ ಹೌಸ್ನ ಜಿ.ಏನ್. ಮೋಹನ್ ನಮ್ಮ ಬೆನ್ನಿಗೆ ನಿಂತಿರುವುದು ನಮಗೆ ಆನೆ ಬಲವನ್ನೇ ತಂದಿದೆ. ಗದಗದ ಸಾಹಿತ್ಯ ಸಮ್ಮೇಳನದ ಸಂಪೂರ್ಣ ಕವರೇಜ್ ಆಲೆಮನೆಯ `ನುಡಿನಮನ' ಮತ್ತು ಮೇ ಫ್ಲವರ್ ಮೀಡಿಯಾ ಹೌಸ್ನ ಕನ್ನಡದ ನಂ.೧ ಬ್ಲಾಗ್ `ಅವಧಿ' ಸಂಯುಕ್ತವಾಗಿ ನಿರ್ವಹಿಸುವ ಗುರುತರ ಜವಾಬ್ದಾರಿಯನ್ನು ಮೋಹನ್ ನಮ್ಮ ಮೇಲಿರಿಸಿದ್ದಾರೆ. ಅವರ ಪ್ರೋತ್ಸಾಹಕ್ಕೆ ನಮ್ಮ ಕೃತಜ್ಞತೆಗಳು.

ಇಲ್ಲಿ ನಡೆವುದು ಕನ್ನಡಿಗರ ಸಮಾಲೋಚನೆ, ಕನ್ನಡದ ದಶ-ನಿರ್ದೇಶನದ ಕುರಿತು ಕಾವೇರಿದ ಚರ್ಚೆ, ಮನ ಮಿಡಿಯುವ ಮಾತುಗಳು, ನಾಡು-ನುಡಿಯ ಚಿಂತನೆ, ಹೀಗೆ..........ನಾಳಿನಿಂದ ಬಿಸಿ ಬಿಸಿ ಚರ್ಚೆ ಶುರು. (ಚರ್ಚೆಗೆ ಕಿಚ್ಚಿದ್ದರೇನೆ ರುಚಿ).

ಈ ಕನ್ನಡದ ಅಖಾಡದೊಳ್ ಮೊದಲು ಇಳಿಯುತ್ತಿರುವ ಜಗಜಟ್ಟಿ, ಓಪನಿಂಗ್ ಬ್ಯಾಟ್ಸ್ಮನ್ ನಮ್ಮನಿಮ್ಮೆಲ್ಲರ ನೆಚ್ಚಿನ `ಚಂಪಾ' - ಪ್ರೊ.ಚಂದ್ರಶೇಖರ ಪಾಟೀಲ! ಇನ್ನೂ ಹಲ ಹಿರಿ ಮತ್ತು ಕಿರಿತಲೆಗಳ ಚಿಂತನ-ಮಂಥನ ಈ ವೇದಿಕೆಯಲ್ಲಿ. ನಿರೀಕ್ಷಿಸಿ.......

ಕನ್ನಡದ ಕೆಲಸಕ್ಕೆ ಕೈಜೋಡಿಸಿ, ನಿಮ್ಮದೇ ಸಾಲುಗಳನ್ನು ನಮ್ಮ ತಾಣಕ್ಕೆ ಕರೆತನ್ನಿ.

ಇಂತಿ ನಿಮ್ಮ,
ಆಲೆಮನೆಯ ಇರುವೆಗಳು

ಹಗಲಿರುಳು ದುಡಿಯೋ ಮನಸ್ಸು ಮಾಡಿರುವ ಬಲಿಷ್ಠ ಯುವ ಇರುವೆಗಳ ಗುಂಪಿದು. ಸಿಕ್ಕಿದ್ದೆಲ್ಲವನೂ ಓದೋ ಹವ್ಯಾಸ, ಬರದಿದ್ದರೂ ತೋಚಿದ್ದೆಲ್ಲವನೂ ಬರೆಯೋ ಚಟ, ನಾಟಕದ ಹುಚ್ಚು, ಸಿನಿಮಾದೆಡಗೆ ಒಂದು ಬೆರಗುಗಣ್ಣು, ಕಲಾತ್ಮಕತೆಯ ಗೀಳು, ಛಾಯಾಗ್ರಹಣದ ಚತುರತೆಗಳನ್ನು ತನ್ನೊಡಲಲ್ಲಿ ಅವಿತಿಟ್ಟುಕೊಂಡಿರುವ ಆಲೆಮನೆಯು ಕನ್ನಡ ನಾಡಿನ ಸಾಂಸ್ಕೃತಿಕ ಜಗತ್ತಿನ ಬೆಲ್ಲದ ಸವಿಯನ್ನು ಸಾಗರದಾಚೆಗೂ ಸಿಂಪಡಿಸುವ ಹಂಬಲದಿಂದ ಚಿಗುರೊಡೆದು, ಇಡೀ ಪ್ರಪಂಚದ ಕನ್ನಡಿಗರೆದೆಯ ಕದ ತಟ್ಟಲು ಸನ್ನದ್ಧವಾಗಿದೆ. ನಮ್ಮ ಈ ಯುವಕರ ಗುಂಪು ಅಭಿವ್ಯಕ್ತಿಗಾಗಿ ಆರಿಸಿಕೊಂಡದ್ದು ಆಧುನಿಕ ನೆಟ್ಲೋಕದ ವೇದಿಕೆಯನ್ನು.

ಪ್ರಸ್ತುತ ನಮ್ಮ ಬಳಗದ ಮೊದಲ ಕೊಡುಗೆ `ನುಡಿನಮನ' ತಮ್ಮ ಮಡಿಲಲ್ಲಿದೆ. ಈ `ಸಂವೇದನಾಶೀಲ' ಇರುವೆಗಳ ಗುಂಪು ಇನ್ನೂ ಅನೇಕ `ತಲೆಕೆಟ್ಟ' ಸಾಹಸಗಳಿಗೆ ಕೈ ಹಾಕಲಿದೆಯೆಂಬ ಆಶ್ವಾಸನೆ ನಮ್ಮ ಕಡೆಯಿಂದ.



ಏಳು ಸುತ್ತಿನ ಕಲ್ಲಿನ ಕೋಟೆಯ ಚಿತ್ರದುರ್ಗದವನಾದರೂ ಹುಟ್ಟಿ ಬೆಳೆದೆದ್ದೆಲ್ಲವೂ ಬೆಂಗಾಡು ಬೆಂಗಳೂರಿನಲ್ಲೇ. ಚಿತ್ರಕಲಾ ಪರಿಷತ್ತಿನಿಂದ ಬಿಎ fine artsನಲ್ಲಿ ಪದವಿ. ಸದ್ಯ ಬೆಂಗಳೂರು ವಿವಿಯಲ್ಲಿ ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಎಂಎಸ್ಸಿ ಕೃಷಿ.

ದಿನಾ ಸಂಗೀತ ಕೇಳಲೇಬೇಕು,
ಇಂಟರ್ನೆಟ್ ಗೇಮಿಂಗ್ ಆಡಲೇಬೇಕು,
ಅಂತೂ ಯಾವುದೋ ಒಂದು ಕೆಲಸದಲ್ಲಿ ಬಿಜಿಯಾಗಿರಲೇಬೇಕು.

ಮೊಗವ ನೋಡಲು ಮಗುವಿನ ಮುಗ್ಧತೆ
ಕೆಲಸದಲ್ಲಿ ಹೆಸರಿಗೆ ತಕ್ಕಂತೆ ಚಾಣಾಕ್ಷತೆ;
ಕಂಪ್ಯೂಟರ ಮುಂದೆ ಎತ್ತಿದ ಕೈ
ಕ್ರಿಯಾತ್ಮಕ ಕೆಲಸಗಳಿಗೆ ಸದಾ ಸೈ.

ಸಹವಾಸ ದೋಷ ಚಾನಕ್ಯನೂ ಬ್ಲಾಗಲೋಕಕ್ಕೆ ಎಂಟ್ರಿ ಪಡೆದಿದ್ದಾನೆ. ಅವನ ಬ್ಲಾಗಿನ ಹೆಸರೇ ವಿಚಿತ್ರ - http://9886534453.blogspot.com



ಉಕ್ಕಿನ ಕಾರ್ಖಾನೆಯ ಭಧ್ರಾವತಿ ಮೂಲ ನೆಲೆಯಾದರೂ ಬೆಂಗಳೂರಿನ ಗಾಂಧೀ ಬಜಾರೇ ತವರು ಮನೆ ಎಂಬಷ್ಟು ಸನಿಹ. ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಸದ್ಯ ಸರ್ಕಾರಿ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಛಾಯಾಗ್ರಹಣದ ಅಭ್ಯಾಸ ನಡೀತಾ ಇದೆ.

ಫೋಟೋ ತೆಗೆಯೋದು ಫ್ಯಾಷನ್ನೂ ಹೌದು, ಪ್ಯಾಷನ್ನೂ ಹೌದು,
ನೋಡೋರಿಗೆ ಮೊದಲೆ ಕೊಡ್ತಾನೆ ಕಾಷನ್ನು!
ಸ್ನೇಹಿತರ ಜೊತೆ ಸುತ್ತೋದೆ ಇವನ ರೀತಿ
ಸುತ್ತಿ-ಸುತ್ತಿ ತಿಳಿದುಕೊಳ್ಳಬೇಕು ಅವನ ನೀತಿ.

ಸಿನಿಮಾ ಛಾಯಾಗ್ರಾಹಕನಾಗೋ ಕನಸು
ಪ್ರತಿನಿತ್ಯ ಇದಕ್ಕೆ ನಡೆದಿದೆ ಕಸರತ್ತು;
ಆನಿಮೇಷನ್ನಲ್ಲೂ ಮಾಸ್ಟರಾಗೋ ಮನಸು
ಕಂಪ್ಯೂಟರ್, ಕ್ಯಾಮೆರಾ, ಮೊಬೈಲ್ ಇವೇ ಜಗತ್ತು.


ಮೂಲ ಕೋಲಾರ ಜಿಲ್ಲೆಯ ಕೈವಾರ. ಆದರೆ ಹುಟ್ಟಿ ಬೆಳೆದೆದ್ದೆಲ್ಲವೂ ಬೆಂಗಳೂರಿನಲ್ಲೇ. ಓದುವ ಗೀಳು ತಲೆಗತ್ತ ದಿನದಿಂದ ಪ್ಯಾಷನ್ ಆದದ್ದು ಓದಲ್ಲ, ಬರವಣಿಗೆ! ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮುಗಿಸಿ ಸದ್ಯ ಬೆಂಗಳೂರು ವಿವಿಯಲ್ಲಿ ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಎಂಎಸ್ಸಿ ಅಭ್ಯಾಸ.

ಆ ಪುಸ್ತಕ, ಈ ಪುಸ್ತಕ ಇವೇ ಆಸ್ತಿ
ಗೆಳೆಯರ ಜೊತೆಗೂ ಇಲ್ಲಾ ಮಸ್ತಿ-ಗಿಸ್ತಿ;
ಬರವಣಿಗೆ, ಕಂಪ್ಯೂಟರ್ ಇವನ ದೋಸ್ತಿ
ಮಾತುಕತೆ, ಹರಟೇಲಿ ಕಾಲ ಕಳೆಯೋದು ಜಾಸ್ತಿ.

ಎಲ್ಲ ಪತ್ರಿಕೆಗಳಲ್ಲೂ ಪ್ರಕಟವಾಗಿವೆ ಇವನ ಲೇಖನ
ಪುಸ್ತಕವನ್ನೇ ಮಾಡಿ ಪ್ರಕಟಿಸಬೇಕು ಅನ್ನೋ ಚಿಂತನ;
ಇದ್ದಂತೆ ಇವನೊಬ್ಬ ಎನ್ಸೈಕ್ಲೋಪೀಡಿಯಾ
ಕೊಡ್ತಿರ್ತಾನೆ ಎಲ್ಲರಿಗೂ ಒಳ್ಳೊಳ್ಳೆ ಐಡಿಯಾ.

ಕನ್ನಡ ಬ್ಲಾಗಲೋಕದಲ್ಲಿ ಇವನದೇ ಒಂದು ಲೋಕ - ಆದಿಲೋಕ!
http://adiloka.blogspot.com


ಬಿಡಾರ ಮಹಾರಾಜರದ್ದು ಬಿಡದಿ. ಇವನಿಗೆ ಬಸವನಗುಡಿಯ ನ್ಯಾಷನಲ್ ಕಾಲೇಜು ಎರಡನೇ ಮನೆಯಿದ್ದ ಹಾಗೆ. ಅಲ್ಲೇ ಬಿಎಸ್ಸಿ ವ್ಯಾಸಂಗ, ಸದ್ಯ ಈಗ ಬೆಂಗಳೂರು ವಿವಿಯಲ್ಲಿ ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಎಂಎಸ್ಸಿ ಕೃಷಿ.

ಬರೀ ಓಡಾಟವೇ ಇವನ ಜೀವನ
ಬಸ್ಸಲ್ಲೇ ಓದು ನಿದ್ದೆ, ಬರೀತಿರ್ತಾನೆ ಕವನ;
ಎಲ್ಲದರಲ್ಲೂ ಸ್ವಲ್ಪ ಹೆಚ್ಚೇನೇ ಹುಮ್ಮಸ್ಸು
ಇದ್ರಿಂದಾನೇ ಗೆಳೆಯರಿಗೆ ಇವನ್ಮೇಲೆ ಮುನಿಸ್ಸು.


ನಾಟಕ, ನಟನೆ, ನಿರ್ದೇಶನ, ಬಿಟ್ಟಿಲ್ಲ ಯಾವ ಜಾಗ
ಕಾಲೇಜು-ಓದು-ಬರಹ ನಡೆಯುತ್ತೆ ಆಗಾಗ;
ಸಾಕ್ಷ್ಯಚಿತ್ರ, ಸಾಹಿತ್ಯದ ಹುಚ್ಚು ಹತ್ತಿದೆ ಈಗೀಗ
ಕ್ರೀಯಾಶೀಲತೆ-ಕಲಾತ್ಮಕತೆ ಬದುಕಿನ ಭಾಗ.

ಇವನ್ದೂ ಒಂದು ಬ್ಲಾಗ್ ಇದೆ. ಓದೇ ಸವಿಯಬೇಕು ಪಾಪು ಪುಟ.
http://papuputa.blogspot.com