Wednesday, February 2, 2011

ಅ......ಆ.....:

ಆಲೆಮನೆಯ ಇರುವೆಗಳ ಕನ್ನಡದ ಗೂಡು "ನುಡಿನಮನ" ಕಟ್ಟಿ ಇಂದಿಗೆ ಒಂದು ವರ್ಷ......ಈ ಸುಸಂದರ್ಭದಲ್ಲಿ ಆಲೆಮನೆ ಇರುವೆಗಳ ಗುಂಪು ಮತ್ತಷ್ಟು ಉತ್ಸಾಹಿ ಗೆಳೆಯರೊಂದಿಗೆ ದೊಡ್ಡ ಸೇನೆಯನ್ನೇ ನಿರ್ಮಿಸಿಕೊಂಡು, ಬೆಂಗಳೂರಿನಲ್ಲಿ ಆರಂಭಗೊಳ್ಳಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಸುತ್ತುವರಿಯಲು ಸನ್ನದ್ಧವಾಗಿದೆ. ಈ ಯುವ ಮನಸ್ಸುಗಳಿಗೆ ಚಿಲುಮೆಯ ಚೂಯಿಂಗಮ್ ನೀಡುತ್ತಿರುವ 'ಅವಧಿ'ಯ ಜಿ.ಎನ್. ಮೋಹನ್ರವರಿಗೆ ನುಡಿನಮನದ ಮುಖೇನ ನಮಿಸುತ್ತಿದ್ದೇವೆ.

ಡಿಸೆಂಬರ್ ನಿಂದ ಜನವರಿಗೆ ಬಂದು ಅಲ್ಲಿಂದ ಒದ್ದಾಡಿ ಫೆಬ್ರವರಿಯಲ್ಲೇ ದಿನಾಂಕ ಗಟ್ಟಿಯಾಗಿ ಸಮ್ಮೇಳನದ ಸಿದ್ಧತೆಗಳು ತ್ವರಿತಗತಿಯಲ್ಲಿ ಸಾಗಿವೆ. ಸಿಲಿಕಾನ್ ವ್ಯಾಲಿಯೆಂದೇ ಹೆಸರಾಗಿರುವ ಬೆಂಗಳೂರು ಐಟಿ-ಬಿಟಿ ಕಂಪೆನಿಗಳಿಂದ ತುಲುಕುತ್ತಿದ್ದರೂ ಅಗತ್ಯವಾದ ಹಣದ ನೆರವು ಕನ್ನಡದ ಕೆಲಸಕ್ಕೆ ದೊರೆಯದೇ ಇರುವುದು ನೋವಿನ ಸಂಗತಿ. ಕೈಯ್ಯಲ್ಲಿರುವ ಹಣದಿಂದಲೇ ನಲ್ಲೂರ್ ಪ್ರಸಾದ್ರವರು ಕೆಲಸ ಪ್ರಾರಂಭಿಸಿದ್ದು ಹಿರಿಯ-ಕಿರಿಯ ಸಾಹಿತ್ಯಾಸಕ್ತರು ಹಿನ್ನೆಲೆಯಲ್ಲಿ ದುಡಿಯುತ್ತಿರುವುದು 77ನೇಯ ಕನ್ನದ ಸಾಹಿತ್ಯ ಸಮ್ಮೇಳನಕ್ಕೆ ಒಂದು ವಿಶೇಷ ಕಳೆ ಕಟ್ಟುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಸಾಹಿತ್ಯ ಸಮ್ಮೇಳನವೆಂದರೆ ಅದೇನೋ ಒಂದು ಹುರುಪಿನ ಸಂಚಲನ, ಯುವಕರಲ್ಲಿ ಹಬ್ಬದ ಉತ್ಸಾಹ, ತಮ್ಮದನ್ನು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳಲು ತವಕಿಸುವ ಸಾಹಿತಿಗಳ ಗುಂಪು, ಓದುಗ ಪ್ರೇಮಿಗಳಿಗೆ ಪುಸ್ತಕ ಮೇಳದಲ್ಲಿ ಮುಳುಗುವ ಸದಾವಕಾಶ, ಎಲ್ಲವನ್ನೂ ನೋಡುತ್ತಾ, ಓಡಾಡುತ್ತಾ, ಭೋಜನದ ಬಗೆಗೆ ಗಮನ ಹರಿಸೋ ತಿಂಡಿ ಪ್ರಿಯರು, ವ್ಯಾಪಾರಿಗಳಿಗೆ ಸರಕು ಖಾಲಿ ಮಾಡೊ ಸುಗ್ಗಿ ಕಾಲ, ಹೀಗೆ ಇದು ಜಾತ್ರೆಯೋ, ಹಬ್ಬವೋ, ಸಂತೆಯೋ, ಮೇಳವೋ............ ಏನೆಂದು ನೀವೇ ಅರ್ಥೈಸಿಕೊಳ್ಳಬೇಕು.
ಆಲೆಮನೆ ಬಳಗ ಇನ್ನು ಕೆಲವೆ ನಿಮಿಷಗಳಲ್ಲಿ ಚಿತ್ರ ಹಾಗು ವೀಡಿಯೋ ಸಮೇತವಾಗಿ ನಿಮಗೆ ಸಮ್ಮೇಳನದ ಬೆಲ್ಲದ ಸವಿಯನ್ನು ಉಣಬಡಿಸಲಿದೆ.
ಹಾ.........ನಿಮ್ಮ ಸ್ನೇಹಿತರು, ಮನೆ-ಮಂದಿ ಎಲ್ಲರಿಗೂ ಈ ಸುದ್ದಿ ಮುಟ್ಟಿಸಿ, ಬೇಗ ಬೇಗ ಸಿದ್ಧರಾಗಿ ಕುಳಿತಿರಿ....... ಅದೋ ನಮ್ಮ ಇರುವೆಗಳ ಸಾಲು ಶಿಸ್ತಿನಿಂದ ಇತ್ತಲೇ ಬರುತ್ತಿದೆ........

0 comments: